Tuesday, April 6, 2010

ಕೆ ಎಸ್ ಗೋಪಾಲಕೃಷ್ಣ - ನಾದೋಪಾಸನೆಯ ತುರೀಯಾವಸ್ಥೆ

ಇವತ್ತು ನನ್ನ ಜನ್ಮ ಸಾಫಲ್ಯ ಕಂಡ ದಿನ ಅಂದ್ರೆ ಅತಿಶಯೋಕ್ತಿಯಲ್ಲ. ವೇಣು ಮಾಂತ್ರಿಕ ಗೋಪಾಲಕೃಷ್ಣ ಅವರ ಕಚೇರಿ ಕೇಳಬೇಕೆಂಬ ಉತ್ಕಟವಾದ ಆಸೆ ಅವರ ಭೈರವಿ ಬಾಲಗೋಪಾಲ,ಮೋಹನ ನನ್ನುಪಾಲಿಮ್ಪ, ರಂಜನಿ ಮಾಲಾ ಇವೆಲ್ಲ ಕೇಳಿದಾಗಿಂದ ಇತ್ತು.ಇವತ್ತು ನನ್ನ ಆಸೆ ನೆರವೇರಿತು. ನನ್ನ ಬೊಗಸೆ ಎಷ್ಟು ದೊಡ್ಡದೋ ನಾ ಕಾಣೆ ,ಆತ ಮಾತ್ರ ಮೊಗೆದು ಮೊಗೆದು ಕೊಟ್ಟರು ನಿಸ್ವಾರ್ಥದಿಂದ ,ನಿರ್ವಾಕರತೆಯಿಂದ ,ತಾಯಿಯ ಸಹಜ ಪ್ರೇಮದಂತೆ .ನಿಜವಾದ ವಾತ್ಸಲ್ಯವನ್ನು ಕಾಣದೆ ಕಂಗಾಲಾದ ಮಗುವಿನ ಹೃದಯ ವೇದನೆಯನ್ನು ಅರ್ಥ ಮಾಡಿಕೊಂಡು ದುಗುಡ ಶಮನ ಮಾಡಿದ ರೀತಿ ಅನನ್ಯ. . ಪ್ರಯತ್ನವಿಲ್ಲದೆ ಹರಿಯುವ ನಾದ ಸುಧಾರಸ , ಸುಲಭ ಅನ್ನಿಸುವ ಆದರೆ ಕೈಗೆಟುಕದ ಸ್ವರಪ್ರಸ್ತಾರ ಶೈಲಿ , ಬಿಗಿಯಾದ ತಾಳ ನಿರ್ವಹಣೆ, ಶಾಂತ ಮನೋಹರವಾದ ಮನೋಧರ್ಮ , ತನ್ನ ಶಾಂತ ನಿಶ್ಚಲ ಮನೋಭಾವದಿಂದ ಪಕವಾದ್ಯದವರನ್ನು ತನ್ನ ಮಟ್ಟಕ್ಕೆ ಏರಿಸಿ ತನ್ನಂತೆಯೇ ನಡೆಸುವ ಧೀರ ಉದಾತ್ತ ಶೈಲಿ ಅಪೂರ್ವ.

ತಮ್ಮ ಅನಂತ ಪದ್ಮನಾಭನ ವಿಗ್ರಹ ತೆಗೆದು ಮುಂದೆ ಇಟ್ಟುಕೊಂಡು ಧ್ಯಾನಸ್ಥಾಗಿ ಆತನನ್ನು ಬೇಡಿ ವಿನಮ್ರ,ಶಾಂತ ಚಿತ್ತದಿಂದ ಪ್ರಾರಂಭಿಸಿದರು .

ಮೊದಲಿಗೆ ಶ್ರೀ ರಾಗದ ಆಲಾಪನೆ. ಬೆಳಗಿನ ಜಾವದ ಮಂಗಳಕರವಾದ ವಾತಾವರಣ ಮೂಡಿದಂತ ಭಾವನೆ.ಸೂರ್ಯೋದಯ ಹಕ್ಕಿಗಳ ಚಿಲಿಪಿಲಿ ಇಂಥ ಭಾವನೆಗಳೇ ಮೂಡಿದವು ನನಗೆ.ಶ್ರೀ,ಮಣಿರಂಗು ಇಂಥ ರಾಗಗಳನ್ನ ಯಾಕೆ ಹೆಚ್ಚು ಹಾಡಲ್ವೋ ಗೊತ್ತಿಲ್ಲ ಇವತ್ತು ಇವರು ನುಡಿಸಿದ ಪುಟ್ಟ ಆಲಾಪನೆ ನನ್ನ ಮನದಲ್ಲಿದ್ದ ಕಷ್ಮಲವನ್ನು ಒಂದೇ ಸಾರಿಗೆ ತೊಳೆದು ಹಾಕಿತು ಅಂದರೆ ತಪ್ಪಾಗಲಾರದು. ದೇವಸ್ಥಾನಕ್ಕೆ ಕಾಲು ತೊಳೆದು ಒಳಗೆ ಹೋಗುತ್ತೆವಲ್ಲ ಹಾಗಾಯಿತು ಈ ಪುಟ್ಟ ಆಲಾಪನೆ! ವರ್ಣ ನಿಧಾನವಾಗಿ ನುಡಿಸಿದರು. ತುಂಬಾ ಚೆನಾಗಿತ್ತು , ಸ್ವರಕಲ್ಪನೆ ಅದ್ಭುತವಾಗಿತ್ತು. ವಿಶ್ರಾಂತಿಯಿಂದ ನುಡಿಸಿದರು. ಮ್ರಿದಂಗದ ನಾದ ಕೇಳಬೇಕೆನಿಸಿದರೆ ಹಾಗೇ ಸುಮ್ಮನೆ ಕಣ್ಣುಮುಚ್ಚಿ ಕುಳಿತು ಬಿಡುತ್ತಿದ್ದರು. ಮತ್ತೆ ಒಂದು ಅದ್ಭುತವಾದ ಸಂಚಾರ ನುಡಿಸಿ ಮುಗುಳುನಗುತ್ತಿದ್ದರು. ಅಯ್ಯೋ ಇದೇ ಅಲ್ವೇನೋ ಕಲೆ ಅಂತ ಮನಸ್ಸು ಕೇಳ್ತಿತ್ತು. ಹೌದು ಇದೇ! ಒಂದು ಕ್ಷಣವೂ ಬಿಡಬೇಡ ಎಂದು ಇನ್ನೊಂದು ಮೂಲೆಯಿಂದ ಕೂಗಿತು ಮನಸ್ಸು. ಕಲ್ಪನಸ್ವರವೂ ಸೇರಿದಂತೆ ಸುಮಾರು ೨೫ ನಿಮಿಷ ಶ್ರೀ ರಾಗ ತೆಗೆದುಕೊಂಡಿತು. ಕಚೇರಿಗೆ ಅತ್ಯಂತ ಶುಭಾಸ್ಕರವಾದ ಆರಂಭ.

ನಂತರ ನಾಟ ರಾಗದ ಆಲಾಪನೆ. ನಂಗೆ ನಾಟ ಅಂದ್ರೆ ಅಬ್ಬರ,ಜಮಾವಣೆ ಕೊಡುವ ರಾಗ ಅಂತಷ್ಟೇ ಇತ್ತು ಭಾವನೆ. ಇವ್ರು ಅದನ್ನ ಸುಳ್ಳು ಮಾಡಿದರು . ನಿಧಾನವಾಗಿ ಬೆಳೆಸಿದರು ರಾಗ. ಸಂಜೆಯ ಹೊತ್ತು ಕೆರೆ ದಂಡೆಯ ಮೇಲೆ ಏಕಾಂಗಿಯಾಗಿ ಆತ್ಮ ಸಂತೋಷಕ್ಕೆ ನುಡಿಸುವ ಗೋಪಾಲನಂತೆ ಕಂಡು ಬಂದಿತು ನಂಗೆ ಅವರ ಶೈಲಿ. ಕೆಲವೊಮೆ ಒಳ್ಳೇ ಸಂಚಾರ ಬಂದಾಗ ತುಟಿಯಂಚಲ್ಲೇ ಸಣ್ಣ ಕಿರುನಗೆ ಮತ್ತೆ ಅದನ್ನೇ ನುಡಿಸಿ ತೃಪ್ತಿ ಪಡುವ ರೀತಿ ಎಷ್ಟೇ ಹೊಸತನ್ನು ಕಂಡುಹಿಡಿದರೂ ಶಾಸ್ತ್ರೀಯ ಚೌಕಟ್ಟನ್ನು ಮೀರದ ಶಿಸ್ತು ಬಹಳ ಇಷ್ಟವಾಯಿತು. ವಿವಾದಿ ಸ್ವರ ಹಿಡಿಯುವಾಗ ಹೃದಯ ಕಲಕಿದಂತಹ ಭಾವನೆ ಆಗ್ತಿತ್ತು :) ಕೃತಿ ಯಾವ್ದು ಅಂತ ಗೊತ್ತಾಗಲಿಲ್ಲ. ಸ್ವರ ಪ್ರಸ್ತಾರ ಅಮೋಘವಾಗಿತ್ತು. ಇಲ್ಲಿ ಹೆಚ್ಚು ಮುಕ್ತಾಯಿಗಳಿಗೆ ಗಮನ ಕೊಟ್ಟರು. ಲಯದ ಮೇಲೆ ಒಳ್ಳೇ ಹಿಡಿತ. ಮ್ರಿದಂಗದ ನಡೆಗಳನ್ನ ನುಡಿಸುವಾಗ ಯಾವುದೇ ಆತುರವಿಲ್ಲದೆ ಸುಶ್ರಾವ್ಯವಾಗಿಯೇ ನುಡಿಸಿದರು . ಅದು ವಿಶೇಷ ಅನ್ನಿಸಿತು :)ಇವೆಲ್ಲ ಸೇರಿ ಮತ್ತೊಂದರ್ಧ ಘಂಟೆ ತೆಗೆದುಕೊಂಡರು .

ಮುಂದೆ ಮಾಯಾಮಾಳವಗೌಳ ತೆಗೆದುಕೊಂಡರು. ಎಷ್ಟು ದಿನ ಆಗಿತು ಈ ರಾಗ ಕೇಳಿ . ಮ ಪ ಮಾ ಮ ಅಂತ ಕೇಳಿ ಕಣ್ಣು ಜಿನುಗಿತು. ಮಂದ್ರದ ಗಂಭೀರ ಸಂಚಾರಗಳು ಆ ರಾಗದ ಸುಕೋಮಲ ಗಂಭೀರತೆ ,ಸ್ತ್ರೀತ್ವ ಉಳ್ಳ ಪೌರುಷ ಇವೆಲ್ಲದರ ಪ್ರತ್ಯಕ್ಷ ಅನುಭವ ಆಗ್ತಾ ಹೋಯ್ತು ರಾಗ ಬಿಡಿಸ್ತ ಇದ್ದ ಹಾಗೆ. ಪರಮಯೋಗಿ ಕೃಷ್ಣ ಯೋಗ ಮುದ್ರೆ ತಳೆದು ಎಲ್ಲರನ್ನೂ ಕೊಳಲಿನ ನಾದದ ಮೂಲಕ ತನ್ನ ದಿವ್ಯಲೋಕಕ್ಕೆ ಕರೆಯುತ್ತಿರುವಂತೆ ಭಾಸವಾಯಿತು . ಸಂತೋಷಮುಗ.....ಪೂಜಿಂಚು ಅಂತ ನಿಲ್ಲಿಸಿ ಸುಮ್ಮನಾದರು. ರಿಶಭದಲ್ಲಿ ಹಾಗೆ ನ್ಯಾಸ ಮಾಡಿ ತುಳಸೀದಳ ಶುರು ಮಾಡಿದರು . ಬಹಳ ಚೆನ್ನಾಗಿತ್ತು. (ಕ್ಲೀಷೆ ) ಸರಸೀರುಹ ಎಂಬಲ್ಲಿ ಮಾಡಿದ ನೆರವಲು ಮತ್ತು ಸ್ವರಕಲ್ಪನೆ ಕೂಡ ಸೊಗಸಾಗಿ ಮೂಡಿಬಂತು.

ಮುಂದೆ ಕಾನಡ ರಾಗದ ಮುದ್ದಾದ ಆಲಾಪನೆ. ಸೂಕ್ಷಮತೆಗಳನ್ನ ಎಳೆ ಎಳೆಯಾಗಿ ಬಿಡಿಸಿಟ್ಟರು. ವಯೊಲಿನ್ ಕೂಡ ಚೆನ್ನಾಗಿತ್ತು . ನಂತರ ರಾಮ ನಾಮ...ಸುಖಿ ಎವ್ವರೂ ಅಂತ ನಿಲ್ಲಿಸಿದಾಗ ವಿಚಿತ್ರವಾದ ಆನಂದ ಉಂಟಾಯಿತು. ಹಾಗೆ ಬೇರೆ ಬೇರೆ ಥರ ನುಡಿಸಿದರು. ಕೃತಿಯನ್ನ ತುಂಬಾ ನಿಧಾನವಾಗಿ ವಿಶ್ರಾಂತಿಯಲ್ಲಿ ನುಡಿಸಿದರು , ಸ್ವರಕಲ್ಪನೆ ಮಾಡಲಿಲ್ಲ. ಈ ವೇಳೆಗಾಗಲೇ ೯ ಘಂಟೆ ಹೊಡೆದಿತ್ತು, ಅವರಿಗೆ ಅದರ ಪರಿವೆ ಇರಲಿಲ್ಲ. ಸಮಯ ನೋಡಿ ಗಾಬರಿ ಆದರೂ ಜನ ಒಬ್ಬರೂ ಕದಲಿರಲಿಲ್ಲ.

ಕಲ್ಯಾಣಿ ಮೊದಲಾಯಿತು. ಈ ನಡುವೆ ಈ ರಾಗ ದೇವತೆ ನನ್ನ ಮೇಲೆ ಕೃಪೆ ಬೀರಿದ್ದಾಳೆ ಅನ್ಸತ್ತೆ. ಅದ್ಭುತವಾದ ಕಲ್ಯಾಣಿ ಕೇಳೋ ಸುಯೋಗ ಮೇಲಿಂದ ಮೇಲೆ ಒದಗಿ ಬರ್ತಾ ಇದೇ. ಇವತು ನನ್ನ ಸ್ನೇಹಿತ ಕೈ ಎತ್ತಿ ಮುಗಿದು ಬಿಟ್ಟ. ಕಲ್ಯಾಣಿ ತೆಗೆದುಕೊಂಡಾಗ. ನಿಧಾನವಾಗಿ ಬಿಡಿಸ್ತಾ ಹೋದರು. ಈರಾಗದ ಲಾಲಿತ್ಯ ,ಮುಗ್ಧತೆ ,ಬಳುಕು,ವಯ್ಯಾರ ,ನಿತ್ಯ ಶಾಂತತೆ ಬೇರೆ ರಾಗಗಳಿಗೆ ಪ್ರಯತ್ನ ಸಿದ್ಧವಾದರೂ ಕಲ್ಯಾಣಿಗೆ ಅದು ಸ್ವಭಾವ ವಿಶೇಷ ! ಒಂದು ಗಾಢವಾದ ಶಕ್ತಿಯ ಪರಿಣಾಮದಿಂದ ಎಲ್ಲರೂ ಆನಂದದಿಂದ ಪ್ರೇಮಾಶ್ರುಗಳನ್ನು ಸುರಿಸುತ್ತಿರುವ ಹಾಗೆ ಅನ್ನಿಸಿತು ನನಗೆ . ಅಂತ ಅತ್ಮಾನಂದಕರವಾದ ಆಲಾಪನೆ. ಷಡ್ಜದ ತನಕ ಬೆಳಸಿ ಪಿಟೀಲಿಗೆ ಬಿಟ್ಟರು. ಪಾಪ ಆತನಿಗೆ ನುಡಿಸುವುದಕ್ಕಿಂತ ಕೇಳುವುದರಲ್ಲೇ ಆಸಕ್ತಿಯೇನೋ ಬೇಗ ಷಡ್ಜ ತಲುಪಿ ಅವರಿಗೆ ಬಿಟ್ಟರು. ಮುಂದೆ ಶದ್ಜದಿಂದಾಚೆ ಬೆಳಸಿ ಮಂದ್ರಕ್ಕೆ ವಾಪಸ್ ಬಂದು ಶದ್ಜದಲ್ಲೇ ಲೀನವಾದರು. ಸುಮಾರು ಅರ್ಧಗಂಟೆಯ ನಿರಂತರ ಧಾರೆ . ಏತಾವುನರ ಕೃತಿ ತೆಗೆದುಕೊಂಡರು. ಅಲ್ಲ ಖುಷಿಗೂ ಒಂದು ಪರಿಮಿತಿ ಬೇಡವೇ.(ಈ ಕೃತಿ ಅಂದ್ರೆ ಪ್ರಾಣ ನನಗೆ) ವಿಳಂಬ ಮಧ್ಯಮ ಕಾಲದಲ್ಲಿ ನುಡಿಸಿದರು . ಶಿವ ಮಾಧವ ಬ್ರಹ್ಮ ಅನ್ನುವಲ್ಲಿ ಸ್ವರಕಲ್ಪನೆ ಬಹಳ ಚೆನ್ನಾಗಿತ್ತು.

ಅವರ ಸಂಗೀತದ ವಿಶೇಷ ಅಂದರೆ ಎಲ್ಲ ರಸಗಳಿಗೂ ಶಾಂತಿಯ ಒಂದು ಹಿಮ್ಮೇಳ ಇರತ್ತೆ. ಅದರ ಶ್ರುತಿಯಲ್ಲೇ ಮತ್ತೆಲ್ಲವೂ ಉದ್ಭವಿಸೋದು ಅಂತ. ಹಾಗೇ ಇತ್ತು. ದೇಶ ಕಾಲಗಳನ್ನು ಸ್ಥಬ್ಧಗೊಳಿಸುವ ಶಕ್ತಿ ಕಲೆಗಲ್ಲದೆ ಮತ್ತಾರಿಗಿದೆ. ನನಗಂತೂ ಇದು ದಿವ್ಯಾನುಭವ.

ಒಂದು ಸಂಗೀತ ಕಚೇರಿಯಾದ ಮೇಲೆ ಎಲ್ಲರ ಕಣ್ಣಲ್ಲೂ ಒಂದು ಹೊಳಪು,ಸಂತೃಪ್ತಿಯ ಭಾವ ಉಂಟಾಗಿರಬೇಕು . ಹೃದಯ ಕರಗಬೇಕು. ಅಯ್ಯೋ ಇಷ್ಟೇ ಜೀವನ ಇದಕ್ಕಿಂತ ಸುಖ ಮತ್ತಾವುದು ಎಂಬ ಕ್ಷಣಿಕವಾದ ಬ್ರಹ್ಮಾನಂದ ಉಂಟಾಗಬೇಕು. ಅದು ರಾಗವನ್ನು ಅದರ ವೈವಿಧ್ಯವನ್ನು ತಾಳದ ಕ್ಲಿಷ್ಟತೆಯನ್ನು ಮತ್ತಿತರ ಅಂಶಗಳನ್ನು ಗಮನಿಸುವ ವಿದ್ವಾಂಸನಿಗು ಹಾಗೇ ಇವಾವೂ ಗೊತ್ತಿಲ್ಲದ ಸಾಮಾನ್ಯ ರಸಿಕನಿಗು ಹೃದಯ ಕರಗಿಸಬೇಕು ,ಮನೋ ಸಂಸ್ಕಾರ ಸಾಧಿಸಬೇಕು ಆಗ ಅದು ಉನ್ನತವಾದ ಕಲೆ. ಆತ ಶ್ರೇಷ್ಠವಾದ ಕಲಾವಿದ. ನಾದೋಪಸಕ . ಗೋಪಾಲಕೃಷ್ಣರ ಸಂಗೀತವು ಇವೆಲ್ಲದರ ಸಾಕ್ಷಾತ್ ದರ್ಶನ ಮಾಡಿಸಿದ್ದಾರೆ ಇಷ್ಟೆಲ್ಲಾ ನನಿಂದ ಹೇಳಿಸಿದ್ದಾರೆ ಹಾಗೆಯೇ ಭಾಷೆಯ ಪರಿಮಿತಿಯನ್ನು ಅರ್ಥ ಮಾಡಿಸಿದ್ದಾರೆ ಆದ್ದರಿಂದ ಹೇಳಲು ಸಾಧ್ಯವಾಗದೆ ಉಳಿದು ಹೋದ ಭಾವನೆಗಳನ್ನು ಹತ್ತಿಕ್ಕಿ ಮೌನಕ್ಕೆ ಶರಣಾಗುವುದು ಒಳಿತೆಂದು ಭಾವಿಸುತ್ತಿದ್ದೇನೆ .

ಸಾಯಿ ಗಣೇಶ್ ಎನ್ ಪಿ